By Village Missionary Movement
Wednesday, 13-Sep-2023ಧೈನಂದಿನ ಧ್ಯಾನ(Kannada) – 13.09.2023
ಜೀವವುಳ್ಳ ವಾಕ್ಯ
"…ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು,…" - ಇಬ್ರಿಯ 4:12
ಪ್ರಖ್ಯಾತಿ ಪಡೆದಿರುವ ದೇವರ ಸೇವಕರಾದ ಜಾನ್ ವೆಸ್ಲಿ ಯವರು ಒಂದು ದಿನ ಮಧ್ಯರಾತ್ರಿಯ ನಂತರ ಕುದುರೆ ಸವಾರಿ ಮಾಡುತ್ತಿದ್ದಾಗ "ನಿಲ್ಲಿಸು" ಎಂಬ ಕಠೋರವಾದ ಧ್ವನಿ ಕೇಳಿಸಿತು. ಅವರು ಕುದುರೆಯನ್ನು ನಿಲ್ಲಿಸಿದಾಗ, ಒಬ್ಬ ಕಳ್ಳ ಅವರ ಕೈಯಲ್ಲಿದ್ದ ಹಣವನ್ನು ಕೇಳಿದನು. ಹಣ ಕೊಡದಿದ್ದರೆ ಪ್ರಾಣ ತೆಗೆಯುವುದಾಗಿ ಚಾಕು ತೋರಿಸಿ ಬೆದರಿಸಿದನು.
ವೆಸ್ಲಿ ಅವರು ತನ್ನ ಕೈಯಲ್ಲಿದ್ದ ಕೆಲವು ನಾಣ್ಯಗಳನ್ನು ಕೊಟ್ಟರು. ಇನ್ನೆಲ್ಲಾದರೂ ಹೆಚ್ಚು ಹಣ ಬಚ್ಚಿಟ್ಟಿದ್ದಾರಾ ಎಂದು ಅವನು ಕುದುರೆಯನ್ನು ಹುಡುಕಿದಾಗ ಕೆಲವು ಪುಸ್ತಕಗಳನ್ನು ಮಾತ್ರ ಕಂಡು ನಿರಾಸೆಯಿಂದ ಹಿಂದೆ ಓಡತೊಡಗಿದ. ವೆಸ್ಲಿ ಕಳ್ಳನನ್ನು ನೋಡಿ, "ನಿಲ್ಲು, ನಾನು ನಿನಗೆ ಕೊಡಲು ಏನೋ ಇದೆ" ಎಂದು ಹೇಳಿದರು. ಕ್ರಿಸ್ತನ ಪ್ರೀತಿಯಿಂದ ತುಂಬಿದ ವೆಸ್ಲಿ, "ಯೇಸು ಕ್ರಿಸ್ತನ ರಕ್ತವು ನಿನ್ನನ್ನು ಎಲ್ಲಾ ಪಾಪಗಳಿಂದ ಶುದ್ಧೀಕರಿಸುತ್ತದೆ" ಎಂದು ಹೇಳಿದರು. ಕೆಲವು ವರ್ಷಗಳ ನಂತರ, ವೆಸ್ಲಿ ಸಂಜೆ ವೇಳೆಯಲ್ಲಿ ಸಭೆಯಿಂದ ಹೊರಬರುವಾಗ, ಅನೇಕರು ಅವರನ್ನು ನೋಡಲು ಮುಂಗೊಳ್ಳುತ್ತಿದ್ದಾಗ, ಒಬ್ಬ ವ್ಯಕ್ತಿ ಮಾತ್ರ ಅವರೊಂದಿಗೆ ಹೇಗಾದರೂ ಮಾತನಾಡಲೇ ಬೇಕು ಎಂದು ಕಾಯುತ್ತಿದ್ದನು. ಆ ಸಂದರ್ಭ ಬಂದಾಗ "ನಾನೇ ಆ ಕಳ್ಳ" ಎಂದು ಮತ್ತು "ಈಗ ನಾನು ಒಬ್ಬ ಉದ್ಯಮಿ"ಎಂದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ "ನಾನು ದೇವರ ಮಗು" ಎಂದು ಹೇಳಿದನು. ತದನಂತರ ಅವನು "ಅಯ್ಯಾ, ನೀವು ಆ ದಿನ ಆ ಮಾತುಗಳನ್ನು ಹೇಳದೇ ಇದ್ದಿದ್ದರೆ, ನಾನು ಇನ್ನೂ ಕಳ್ಳನಾಗಿಯೇ ಇರುತ್ತಿದ್ದೆ" ಎಂದು ಹೇಳಿದನು.
ಇಬ್ರಿಯ 4:12 ರಲ್ಲಿ ಈ ರೀತಿಯಾಗಿ ಓದುತ್ತೇವೆ. "ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ" ಎಂದು.
ಹೌದು, ಪ್ರಿಯರೇ! ದೇವರ ವಾಕ್ಯವನ್ನು ನಮ್ಮಿಂದ ಸಾಧ್ಯವಾದಷ್ಟು ಇತರರೊಂದಿಗೆ ಹಂಚಿಕೊಳ್ಳೋಣ. ನಾವು ದೇವರ ಮಾತುಗಳನ್ನು ಮಾತನಾಡುವಾಗ ಬುದ್ಧಿವಂತಿಕೆಯಿಂದ ಮಾತನಾಡಬೇಕು. ಏಕೆಂದರೆ ದೇವರ ಜೀವವುಳ್ಳ ವಾಕ್ಯಗಳು ಯಾವುದೇ ರೀತಿಯ ಮನುಷ್ಯನನ್ನೂ ದೇವರ ಕಡೆಗೆ ಸೆಳೆಯುವಂತದ್ದು. ಅಷ್ಟೇ ಅಲ್ಲ ಅವರ ಬದುಕನ್ನು ಸಂಪೂರ್ಣವಾಗಿ ಬದಲಾಯಿಸುವಂತದ್ದು. ಆದ್ದರಿಂದ ದೇವರ ವಾಕ್ಯವನ್ನು ಹೇಳಬೇಕಾದವರಿಗೆ ಪ್ರಾರ್ಥಿಸಿ ಬುದ್ದಿವಂತಿಕಯಿಂದ ಹೇಳೋಣ! ಕರ್ತನು ಖಂಡಿತವಾಗಿಯೂ ಕಾರ್ಯ ಮಾಡುತ್ತಾರೆ!
- Mrs. ಶಕ್ತಿ ಶಂಕರ್ ರಾಜ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಯ ಮೂಲಕ ಭೇಟಿಯಾಗುವ ಜನರಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482