By Village Missionary Movement
Monday, 06-Dec-2021ಧೈನಂದಿನ ಧ್ಯಾನ(Kannada) – 06.12.2021
ಛತ್ರದವನ ಸದ್ದು
"...ಛತ್ರದಲ್ಲಿ ಅವರಿಗೆ ಸ್ಥಳವಿಲ್ಲವಾದ್ದರಿಂದ ಆತನನ್ನು ಗೋದಲಿಯಲ್ಲಿ ಮಲಗಿಸಿದಳು" - ಲೂಕ 2:7
Hello ಸ್ನೇಹಿತರೇ! ನಾನು ಬಹಳ ದಿನಗಳಿಂದ ನಿಮ್ಮ ಜೊತೆ ಮಾತಾಡಬೇಕು ಅಂತ ಆಸೆಪಟ್ಟೆ. ಇದು ಡಿಸೆಂಬರ್ ತಿಂಗಳಾಗಿರುವುದರಿಂದ ಖಂಡಿತವಾಗಿಯೂ ಮಾತನಾಡಲೇ ಬೇಕು ಎಂದು ನಿರ್ಧರಿಸಿದ್ದೇನೆ. ನಾನೇ ಛತ್ರದವನು. ಸರಿ, ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ಖಾನೆಷುಮಾರಿ ಬರಸಿಕೊಳ್ಳಬೇಕೆಂಬ ಆಜ್ಞೆಯು ಚಕ್ರವರ್ತಿಯಾದ ಔಗುಸ್ತನಿಂದ ಹೊರಟಿದ್ದ ಸಮಯವದು. ಎಲ್ಲರೂ ತಮ್ಮ ತಮ್ಮ ಊರುಗಳಲ್ಲಿ ಖಾನೇಷುಮಾರಿ ಬರೆಸಿಕೊಳ್ಳಲು ತೆರಳುತ್ತಿದ್ದರು. ಯೂದಾಯದಲ್ಲಿರುವ ಬೇತ್ಲೆಹೇಮ್ ಎಂಬ ದಾವೀದನ ಊರಿನಲ್ಲಿ ನನಗೆ ಒಂದು ಛತ್ರವಿದೆ. ಅಲ್ಲಿಯವರೆಗೂ ಹದಗೆಟ್ಟಿದ್ದ ನನ್ನ ವೃತ್ತಿಜೀವನ ಈಗಷ್ಟೇ ಬಿಸಿಯಾಗತೊಡಗಿತು. ಕೋಣೆಗಳೆಲ್ಲ ತುಂಬಿದ್ದದರಿಂದ ನಾನು ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಕುರ್ಚಿಯಲ್ಲಿ ಕುಳಿತೆನು. ಬಾಗಿಲು ಸದ್ದಾಯಿತು. ಗಲಿಲಾಯದಲ್ಲಿರುವ ನಜರೇತ್ ಎಂಬ ಊರಿನಿಂದ ಯೋಸೇಫನೆಂಬ ಬಡಗಿ ತನ್ನ ಗರ್ಭಿಣಿಯಾದ ತನ್ನ ಹೆಂಡತಿ ಮರಿಯಳೊಂದಿಗೆ ತುಂಬಾ ಯೋಚಿಸುತ್ತಾ, ಹೆದರುತ್ತಾ ಬಂದು ಛತ್ರದಲ್ಲಿ ಸ್ಥಳವಿದೆಯೇ ಎಂದು ಕೇಳಿದರು. ಸ್ಥಳವೇನೂ ಇಲ್ಲ ಎಂದು ಹೇಳಿದ ಕೂಡಲೇ ಇಬ್ಬರೂ ನಿರುತ್ಸಾಹ ಗೊಂಡರು. ಆದರೆ ತುಂಬಾ ಸರಳವಾಗಿದ್ದ ಅವರನ್ನು ನೋಡಿದ ಕೂಡಲೇ ಖಂಡಿತವಾಗಿಯೂ ಸಹಾಯ ಮಾಡಬೇಕು ಎಂಬ ಆಲೋಚನೆ ನನ್ನೊಳಗೆ ಉದ್ಭವಿಸಿತು.
"ನನ್ನ ಮನೆಯ ಹಿಂಭಾಗದಲ್ಲಿರುವ ಕೊಟ್ಟಿಗೆಯಲ್ಲಿ ಇರುತ್ತೀರಾ?" ಎಂದು ಸಂಕೋಚದಿಂದ ಕೇಳಿದಾಗ ಅವರು ಬಹಳ ತೃಪ್ತಿಯಿಂದ ಒಪ್ಪಿಕೊಂಡರು. ಮರಿಯಳಿಗೆ ಗಂಡು ಮಗು ಜನಿಸಿತು. ಮಗುವಿನ ಸುತ್ತಲೂ ಇದ್ದದ್ದೋ ಚೂರು ಬಟ್ಟೆ. ಆದರೆ ಮುಖಕಾಂತಿ ಮತ್ತು ಸೌಂದರ್ಯವು ನೋಡುವವರ ಕಣ್ತುಂಬಿಕೊಳ್ಳುತ್ತಾ, ಮನಸ್ಸಿಗೆ ಮುದ ನೀಡುತ್ತಿತ್ತು. ಆ ನಂತರ ನಡೆದ ಅದ್ಬುತವನ್ನು ನನ್ನಿಂದ ನಂಬಲು ಸಾಧ್ಯವಾಗಲೇ ಇಲ್ಲ. ಅದೇನೆಂದರೆ, ಮಗು ಹುಟ್ಟಿದ ಸುದ್ದಿಯನ್ನು ಪೋಷಕರು ಯಾರಿಗೂ ಹೇಳದೇನೆ ಕುರುಬರು ಮಗುವನ್ನು ನೋಡಲು ಸಂತೋಷವಾಗಿ ಬಂದರು. ಅವರ ಬಳಿ ವಿಚಾರಿಸಿದಾಗ, ದೇವದೂತರು ಈ ಸುದ್ದಿಯನ್ನು ತಿಳಿಸಿದರು ಎಂದು ಹೇಳಿದರು. ಅದರ ನಂತರ ಒಂಟೆಗಳು ನಮ್ಮ ಮನೆ ಬಾಗಿಲಿಗೆ ಬಂದು ನಿಂತವು. ಯಾರೆಂದು ನೋಡಿದರೆ ಪೂರ್ವದಿಂದ ಆಕಾಶವನ್ನು ಅನ್ವೇಷಿಸುತ್ತಿದ್ದ ಜೋಯಿಸರು ಯೆಹೂದ್ಯರ ಅರಸನನ್ನು ನೋಡಲು ಬಂದಿರುವುದಾಗಿ ಹೇಳಿದರು. ಏನು ಅರಸನಾ ಎಂದು ನಾನು ಬಾಯಿ ತೆರೆದು ನಿಂತಾಗ ನಕ್ಷತ್ರವು ಮಾರ್ಗದರ್ಶನ ನೀಡಿತು ಎಂದು ಹೇಳಿದರು. ನಂತರ ಅವರು ತಾವು ತಂದಿದ್ದ ಚಿನ್ನ, ಧೂಪ ರಕ್ತಬೋಳಗಳನ್ನು ಅರಸನಿಗೆ ಕಾಣಿಕೆಯಾಗಿ ಕೊಟ್ಟು ಹೋದರು. ನಾನು ಛತ್ರದಲ್ಲಿ ಸ್ಥಳ ಇಲ್ಲವೆಂದು ಹೇಳಿ ಸುಮ್ಮನಾಗದೇ, ಈ ಚಿಕ್ಕ ಸ್ಥಳವನ್ನಾದರೂ ಕೊಟ್ಟೆನೇ ಎಂದು ತುಂಬಾ ಸಂತೋಷಪಟ್ಟೆನು. ಇಂದು ಲಕ್ಷಾಂತರ ಜನರು ಯೇಸುಕ್ರಿಸ್ತನ ಜನ್ಮಸ್ಥಳವಾದ ನನ್ನ ಮನೆ ಕೊಟ್ಟಿಗೆಗೆ ಭೇಟಿ ನೀಡುತ್ತಾರೆ. ಅದು ಯಾರಿಗೂ ಬೇಡವಾದ ಸ್ಥಳ, ನಿರ್ಲಕ್ಷ್ಯಕ್ಕೊಳಗಾದ ಸ್ಥಳ, ಸ್ವಲ್ಪ ದುರ್ವಾಸನೆ ಬರುವ ಸ್ಥಳ, ಆದರೂ ಯೇಸು ಹುಟ್ಟಲು ಸ್ಥಳವನ್ನು ನೀಡಿದ್ದರಿಂದ ಅದು ಎಷ್ಟು ಅಮೂಲ್ಯವಾದ ಸ್ಥಳವಾಗಿ ಮಾರ್ಪಟ್ಟಿತು ನೋಡಿ.
ಬಹುಶಃ ನಿಮ್ಮ ಹೃದಯ ಕೂಡ ನನ್ನ ಮನೆಯ ಕೊಟ್ಟಿಗೆಯಂತಿರಬಹುದು. ಆದರೆ ನೀವು ಯೇಸುವನ್ನು ನಿಮ್ಮ ಹೃದಯದೊಳಗೆ ಬರಲು ಅನುಮತಿಸಿದರೆ, ನಿಮ್ಮ ಜೀವನವು ಕೂಡ ಖಂಡಿತವಾಗಿಯೂ ಆಶೀರ್ವಾದಕರವಾಗಿ ಇತರರು ನೋಡಿ ವಿಸ್ಮಯಗೊಳ್ಳುವ ರೀತಿಯಲ್ಲಿ ಮಾರ್ಪಡುತ್ತದೆ.
- Mrs. ಅನ್ಬುಜೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಮಾಧ್ಯಮ ಸೇವೆಯ ಮೂಲಕ ಭೇಟಿಯಾಗುವ ಆತ್ಮಗಳು ದೇವರಿಗಾಗಿ ಉತ್ಸಾಹವಾಗಿ ಜೀವಿಸುಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482