ಧೈನಂದಿನ ಧ್ಯಾನ(Kannada) – 21.12.2024
ಧೈನಂದಿನ ಧ್ಯಾನ(Kannada) – 21.12.2024
ನಂಬಿಕೆ
"ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು" - ಜ್ಞಾನೋಕ್ತಿ 22:6
ಮೇರಿ ಟೀಚರ್ ತನ್ನ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಕರೆದು ಅವರಿಗೆ ತಿಳಿದಿರುವ ಹಾಡು ಅಥವಾ ಕಥೆಯನ್ನು ಹೇಳುವಂತೆ ಕೇಳಿದಾಗ, ಪ್ರಿನ್ಸ್ ಓಡಿ ಬಂದು "ನನ್ನನ್ನು ಮರೆಯದ ಯೇಸು ದೇವಾ, ನಿನ್ನ ಕೃಪೆಯಿಂದ ನನ್ನನ್ನು ನಡೆಸು" ಎಂಬ ಹಾಡನ್ನು ತುಂಬಾ ಚಂದವಾಗಿ ಹಾಡಿದನು. ಮೇರಿ ಟೀಚರ್ ಆಶ್ಚರ್ಯಚಕಿತರಾದರು. ಯಾರು ಹೇಳಿಕೊಟ್ಟರು? ಎಂದು ಪ್ರಶ್ನಿಸಿದಾಗ ನಮ್ಮ ಅಜ್ಜಿ ಎಂದು ಹೇಳಿದ ಪ್ರಿನ್ಸ್ ಮುಖದಲ್ಲಿ ತುಂಬಾ ಸಂತೋಷ. ನನ್ನ ಅಜ್ಜಿ ಪ್ರತಿದಿನ ಬೈಬಲ್ ಕಥೆಗಳನ್ನು ಮತ್ತು ಹಾಡುಗಳನ್ನು ಹೇಳಿಕೊಡುತ್ತಾರೆ ಎಂದು ಹೇಳಿದನು. ಅಜ್ಜಿಯ ಪ್ರಯತ್ನದಿಂದಾಗಿಯೇ ಪ್ರಿನ್ಸ್ ನ ಮನಸ್ಸಿನಲ್ಲಿ ಆ ಹಾಡಿನ ಸಾಲುಗಳು ಬಲವಾಗಿ ಅಚ್ಚೊತ್ತಿತು.
ಆ ಚಿಕ್ಕ ವಯಸ್ಸಿನಲ್ಲಿ ಕರ್ತನನ್ನು ಹಾಡಿ ಕೊಂಡಾಡುವ ಹೃದಯವನ್ನು, ವಿಧೇಯತೆಯನ್ನು ಹೊಂದಿದ್ದನು ಎಂಬುದು ಆಶ್ಚರ್ಯಕರವಲ್ಲವೇ! ನಾನು ಮಾತ್ರ ದೇವರನ್ನು ತಿಳಿದುಕೊಂಡರೆ ಸಾಕಾಗುವುದಿಲ್ಲ; ನಮ್ಮ ವಂಶಸ್ಥರು ನಮ್ಮನ್ನು ಅನುಸರಿಸುವಂತೆ ಮಾರ್ಗದರ್ಶನ ಮಾಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಧರ್ಮೋಪದೇಶಕಾಂಡ 6:6,7 ರಲ್ಲಿ “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು.
ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಿ" ಎಂದು ಬರೆದಿರುವ ಆಜ್ಞೆಯನ್ನು ನಾವು ಪಾಲಿಸುತ್ತಿದ್ದೇವಾ? ಎಂದು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳೋಣ.
ನಮ್ಮ ಮನೆಯಲ್ಲಿರುವ ಚಿಕ್ಕ ಮಕ್ಕಳನ್ನು ಕರ್ತನಿಗೆ ಹತ್ತಿರವಾಗಿ ಬೆಳೆಸುವಲ್ಲಿ ನಮ್ಮ ಪಾತ್ರವು ದೊಡ್ಡದಾಗಿದೆ. ನೀವು ದೇವರ ವಾಕ್ಯಗಳನ್ನು ಕಲಿಸುವ ಪ್ರೀತಿಯ ಅಜ್ಜಿಯೇ? ಕರ್ತನು ಖಂಡಿತವಾಗಿಯೂ ನಿಮ್ಮನ್ನು ಮೆಚ್ಚುತ್ತಾರೆ. ತಿಮೊಥೆಯ ಅಜ್ಜಿಯಾದ ಲೋವಿಯಲ್ಲಿಯೂ, ತಾಯಿಯಾದ ಯೂನೀಕೆಯಲ್ಲಿಯೂ ಇದ್ದ ನಂಬಿಕೆಯು ತಿಮೊಥೆಯನಲ್ಲಿಯೂ ವಾಸವಾಗಿದೆ ಎಂದು ಓದುತ್ತೇವೆ. ಅಪೊ. ಪೌಲನು, ಯೌವನಸ್ಥನಾದ ತಿಮೊಥೆಯನ ನಂಬಿಕೆಗೆ ಕಾರಣವಾದ ಅಜ್ಜಿ ಮತ್ತು ತಾಯಿಯನ್ನು ಗೌರವಿಸುವುದನ್ನು 2 ತಿಮೊಥೆಯ 1:4,5 ರಲ್ಲಿ ಓದಬಹುದು. ಆದ್ದರಿಂದ ವಯಸ್ಸಾದ ವಯಸ್ಕರು ಚಿಕ್ಕ ಮಕ್ಕಳಿಗೆ ಸತ್ಯವೇದವನ್ನು ಓದಲು, ದೇವರನ್ನು ಸ್ತುತಿಸಲು ಮತ್ತು ಕ್ರಮವಾಗಿ ಪ್ರಾರ್ಥಿಸಲು ಕಲಿಸಬೇಕು. ಅಷ್ಟೇ ಅಲ್ಲ ಅವರಿಗೆ ಉತ್ತಮ ಮಾದರಿಯಾಗಿಯೂ ಇರಬೇಕು.
ನಿಮ್ಮ ಮನೆಯಲ್ಲಿರುವ ಚಿಕ್ಕ ಮಕ್ಕಳಿಗಾಗಿ ನೀವು ಪ್ರತಿದಿನ ಪ್ರಾರ್ಥಿಸುತ್ತೀರಾ? ಕರ್ತನಲ್ಲಿ ನೆಲೆಗೊಳ್ಳಲು ನೀವು ಅವರಿಗೆ ತರಬೇತಿ ನೀಡುತ್ತೀರಾ? ಅವರಿಗೆ ಉದಾಹರಣೆಯಾಗಿರಲು ನೀವು ನಿಮ್ಮನ್ನು ಸಿದ್ಧಪಡಿಸುತ್ತೀರಾ? ಸಂದೇಹವೇ ಇಲ್ಲ; ನಿಮ್ಮ ಮನೆಯಲ್ಲೂ ತಿಮೊಥೆಯರು ಏಳುತ್ತಾರೆ. ಕರ್ತನೇ ನಿಮ್ಮನ್ನು ಆಶೀರ್ವದಿಸಲಿ. ಆಮೆನ್.
- Mrs. ಎಮೀಮಾ ಸೌಂದರರಾಜನ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿ ಕ್ರಿಸ್ಮಸ್ ಸುವಾರ್ತೆ ಕೂಟದಲ್ಲಿ ಅನೇಕರು ಭಾಗವಹಿಸಲು ಮತ್ತು ರಕ್ಷಣೆಹೊಂದಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482